ಟೀಕೆಯನ್ನು ಎದುರಿಸುವುದು ಹೇಗೆ?

 ಟೀಕೆಯನ್ನು ಎದುರಿಸುವುದು ಹೇಗೆ?

Dr.ವಸುಧಾ ರಾವ್




"ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ", ಎ೦ದರು ರಾಷ್ಟ್ರಕವಿ ಕುವೆ೦ಪು. 

"ಟೀಕೆಯನ್ನು ತಪ್ಪಿಸಲು ಏನೂ ಹೇಳಬೇಡಿ, ಏನೂ ಮಾಡಬೇಡಿ, ಏನೂ ಆಗಬೇಡಿ", ಎ೦ದರು ಅಮೇರಿಕನ್ ಸಾಹಿತಿ ಎಲ್ಬಟ್೯ ಹುಬಾಡ್೯. 

ಇದರ ಅಥ೯, ನಾವು ಜೀವಿಸಿದ್ದರೆ ಟೀಕೆ ಎದುರಿಸಲೇ ಬೇಕು, ಮತ್ತು ಸಕಾರಾತ್ಮಕ ಕಾಯ೯ಗಳನ್ನು ಮು೦ದುವರೆಸಬೇಕು. 


 ನಮ್ಮ ಮನಸು ಟೀಕೆಗೆ ಬಲವಾಗಿ ಪ್ರತಿಕ್ರಯಿಸಿದ0ತೆ ಮೆಚ್ಚುಗೆಗೆ ಪ್ರತಿಕ್ರಯಿಸುವುದಿಲ್ಲ ಎ೦ದು ಮೆದುಳಿನ ವೈಜ್ಞಾನಿಕ ಪ್ರಯೋಗಗಳು ತಿಳಿಸಿದೆ. ಹಾಗಿದ್ದಲ್ಲಿ,

ವರನಟ ರಾಜ್ ಕುಮಾರ್ ಹಾಡಿದ0ತೆ, ಯಾರೇ ಕೂಗಾಡಲಿ, ಊರೇ ಹೋರಾಡಲಿ, ಎಮ್ಮೆಯ ನೆಮ್ಮದಿಗೆ ಭoಗವಿಲ್ಲದ೦ತೆ, ಟೀಕೆಗೆ ಒಳಗಾದಾಗ ನಾವೂ ಎಮ್ಮೆಯ ಸ್ಥಿತಪ್ರಜ್ಞತೆ ಸಾಧಿಸಬಹುದೇ?? 

ಇದನ್ನು ಉತ್ತರಿಸುವಾಗ, ಮನುಷ್ಯನ ಮೆದುಳು ಲಕ್ಷಾಂತರ ವಷ೯ಗಳ ಜೀವ ವಿಕಾಸದ ಉತ್ಪನ್ನ ಎ೦ದು ನೆನಪಿನಲ್ಲಿಟ್ಟುಕೊಳ್ಳಬೇಕು. ಮೆದುಳಿನ ಮಾಹಿತಿ ಸ೦ಸ್ಕರಣೆಯು ನಕಾರಾತ್ಮಕ ಪಕ್ಷಪಾತಿ (evolutionary negative bias) ಆಗಿರದಿದ್ದರೆ, ಮಾನವ ಪ್ರಜಾತಿಯು ಯಾವತ್ತೊ ದೈತ್ಯ ಉರಗಗಳoತೆ ನಶಿಸುತ್ತಿತ್ತು. ಸಮೂಹ ಜೀವಿಯಾದ ಪ್ರಾಚೀನ ಮನುಷ್ಯ ಉಳಿಯಬೇಕಿದ್ದರೆ ಅವನ ಗುOಪಿನ ಅಭಿಪ್ರಾಯ ಪ್ರಧಾನವಾಗಿತ್ತು. ಮೆದುಳಿನಲ್ಲಿರುವ ಬಾದಾಮಿ ಆಕಾರದ amygdala ಯಾವುದೇ ಭಾವನಾತ್ಮಕ ಘಟನೆಯನ್ನು, ಟೀಕೆಗಳನ್ನು, ಅಚ್ಚಳಿಯದ ನೆನಪಾಗಿ hippocampus ನಲ್ಲಿ (ಮೆದುಳಿನ ನೆನಪುಗಳ ಕೇ೦ದ್ರ) ಉಳಿಸುತ್ತೆ. ಈ ಪ್ರಕ್ರಿಯೆಗೆ amygdala priming ಎನ್ನುತ್ತಾರೆ. ಹೀಗಾಗಿ ಟೀಕೆಗಳಿಗೆ ವೇಗವಾಗಿ  ಗಮನ ಹರಿಸುತ್ತದೆ, ಹಾಗೂ ಧೀಘ೯ಕಾಲ ನೆನಪಿನಲ್ಲಿ ಇಡುತ್ತದೆ.  

 

ಹಳೆಯ ಬಳುವಳಿ ಕಾಲ ಬದಲಾದOತೆ ಪೂರಕವಲ್ಲದೇ ಅಥವಾ ನಿಷ್ಪ್ರಯೋಜಕವಾಗಬಹುದಲ್ಲವೇ? ಹಾಗೆಯೇ ಈ ಜೀವವಿಕಾಸದ ಪಳೆಯುಳಿಕೆಗಳು, ಮನುಷ್ಯನ ಮಿದುಳಿನಲ್ಲಿ. 


ಟೀಕೆಗಳನ್ನು ನಾವು ಸಮರ್ಥವಾಗಿ ನಿವ೯ಹಿಸಬೇಕೆಂದರೆ, ಪೂರಕ ಹಾಗೂ ಪೂರಕವಲ್ಲದ ಟೀಕೆಗಳ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿದಿರುವುದು ಮುಖ್ಯ. 


ಪೂರಕ ಟೀಕೆಗಳ ಲಕ್ಷಣಗಳು: 

೧. ನಮ್ಮ ಬಗೆಗೆ ಕಾಳಜಿ ಇರುವವರು, ನಮಗೆ ತೀರ ಹತ್ತಿರವಾದವರು ಟೀಕಿಸುವುದು. ಹತ್ತಿರದವರಾದರೂ, ಕೆಳಗಿನ ಲಕ್ಷಣಗಳು ಇದೆಯೇ ಎಂದು ಆಲೋಚಿಸಿ.


೨. ನಿಮ್ಮ ನಿದಿ೯ಷ್ಟ ಗುಣಗಳು, ನಡವಳಿಕೆಗಳನ್ನು ಟೀಕಿಸುವುದಲ್ಲದೆ, ನಿಮ್ಮನ್ನು ಸಾರಾಸಗಟಾಗಿ ಅಪಮಾನಿಸುವುದಲ್ಲ.

 

( ಉದಾ:  ಸಕಾರಾತ್ಮಕ ಟೀಕೆ:

 ತಾಯಿ ಮಗುವಿಗೆ- ಅ ಮತ್ತು ಇ ಅಕ್ಷರಗಳು ಸರಿಯಾಗಿ ಬರೆದಿಲ್ಲ. ಅದನ್ನು ತಿದ್ದಿ ಬರಿ.


ನಕಾರಾತ್ಮಕ ಟೀಕೆ: ನೀನು ಯಾವಾಗಲೂ ಹೀಗೆ. ಏನೂ ಸರಿಯಾಗಿ ಓದಲ್ಲ)


೩. ಪ್ರಸ್ತುತ ವಿಷಯಗಳ ಬಗ್ಗೆ ಟೀಕಿಸುವುದು. ಹಳೇ ವಿಷಯಗಳನ್ನು ಪ್ರಸ್ತುತ ಟೀಕೆಯಲ್ಲಿ ಪೋಣಿಸದೇ ಇರುವುದು. 

(ಉದಾ: ಬಾಸ್ ಉದ್ಯೋಗಿಗೆ: 

ಸಕಾರಾತ್ಮಕ: ಇವತ್ತು ತಡವಾಗಿ ಬಂದಿರುವುದನ್ನು ಗಮನಿಸಿದೆ. ಇನ್ನು ಮೇಲೆ ಸರಿಯಾದ ಸಮಯಕ್ಕೆ ಬನ್ನಿ.


ನಕಾರಾತ್ಮಕ: ಕಳೆದ ಆರು ತಿಂಗಳಿನಿಂದ ಆಗಾಗ್ಗೆ ಲೇಟಾಗಿ ಬರುತ್ತೀರಿ. ನಿಮಗೆ ಕೆಲಸದಲ್ಲಿ ಆಸಕ್ತಿ ಇಲ್ಲವೇ?)


೪: ಟೀಕೆಗಳಲ್ಲಿ ನಿಮ್ಮ ನ್ಯೂನ್ಯತೆಗಳನ್ನು ಹೇಳುವುದು., ಬೇರೆಯವರನ್ನು ಸೇರಿಸದೇ ಇರುವುದು

(ಉದಾ: 

ಸಕಾರಾತ್ಮಕ: ನೀನು ಈ ಚೆಂಡನ್ನು ಸರಿಯಾಗಿ ಎಸೆಯುತ್ತಿಲ್ಲ.

ನಕಾರಾತ್ಮಕ: ಚೆಂಡನ್ನು ಎಸಿಯಕ್ಕೆ ಬರಲ್ಲ. ನಿನಗೆ ತರಬೇತಿ ಕೊಟ್ಟ ಆ ಶಂಕರ ಮೇಷ್ಟು ಅಷ್ಟಕ್ಕಷ್ಟೇ. )

 

೫. ಖಾಸಗಿಯಾಗಿ ಕಂಡು ತಮ್ಮ ಅಭಿಪ್ರಾಯ ಹೇಳುವುದು. 

(ಉದಾ: 

ಸಕಾರಾತ್ಮಕ: ಹೆಂಡತಿ ಗಂಡನಿಗೆ: ಮುಂದಿನ ಸಾರಿ ರವೆ ತರೋವಾಗ ಬನ್ಸಿ ರವೆ ಎಂದು ನೋಡಿ ತನ್ನಿ.

ನಕಾರಾತ್ಮಕ: ಹೆಂಡತಿ ಗಂಡನಿಗೆ ಮಕ್ಕಳ ಮುಂದೆ: ನಿಮ್ಮಪ್ಪನಿಗೆ ರವೆ ತರೋಕ್ಕೆ ಗೊತ್ತಾಗಲ್ಲ, ಈಗ ಸೈಟು ತಗೆೋತಾರಂತೆ!!)


೬. ನಿಮ್ಮ ಬಗ್ಗೆ ಇರುವ ಟೀಕೆಯನ್ನು ನಿಮಗೇ ಹೇಳುವುದು.


(ಉದಾ:

ಸಕಾರಾತ್ಮಕ:  ಗಂಡ ಹೆಂಡತಿಗೆ: ಈ ಕೋಡುಬಳೆ ಮೆತ್ತಗಾಗಿದೆ. ಮುಂದಿನ ಸಾರಿ ಇನ್ನೂ ಗರಿಗರಿ ಮಾಡು. 


ಗಂಡ ಅತ್ತೆ ಗೆ: ನಿಮ್ಮ ಮಗಳು ಕೋಡುಬಳೆ ಮಾಡುವುದನ್ನು ಕಲಿತಿಲ್ಲ. ನೀವು ಹೇಳಿಕೊಟ್ಟಿದ್ದರೆ ತಾನೇ!!)


ಸಕಾರಾತ್ಮಕ ಟೀಕೆಗಳು ನಮ್ಮ ಮನಸ್ಸಿಗೆ ಸ್ವಲ್ಪ ಬೇಜಾರು ತಂದರೂ, ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಪ್ರೇರೇಪಿಸುತ್ತವೆ. ಆದರೆ ನಕಾರಾತ್ಮಕ ಟೀಕೆಗಳು ಸರಿಯಾಗಿ ನಿಭಾಯಿಸದಿದ್ದರೆ ಆತ್ಮವಿಶ್ವಾಸವನ್ನು ಘಾಸಿಗೊಳಿಸಬಹುದು. 


ತಟ್ಟನೆ ಯಾರಾದರೂ ಟೀಕಿಸಿದರೆ ಹೇಗೆ ಪ್ರತಿಕ್ರಯಿಸಬೇಕು?


೧. ಅವರು ಹೇಳುವುದನ್ನು ಸಂಪೂಣ೯ವಾಗಿ ಕೇಳಿಸಿಕೊಳ್ಳಿ. ಮಧ್ಯೆ ಮಾತನಾಡಬೇಕೆಂದು ಅನಿಸಿದರೂ ಆ ಆಸೆಯನ್ನು ಹತ್ತಿಕ್ಕಿ ಕೇಳಿಸಿಕೊಳ್ಳಿ. 


೨. ಉತ್ತರಿಸಬೇಕೆನಿಸಿದರೆ ಸಮಾಧಾನವಾಗಿ    ಧ್ವನಿ ಏರಿಸದೆ ಉತ್ತರಿಸಿ. 


೩. ಕೋಪ/ ಅಳು/ ಆಕ್ರಮಣಶೀಲ ಪ್ರತಿಕ್ರಿಯೆಗಳನ್ನು ತಡೆಯಲಾರದೇ ಹೋಗಬಹುದು ಎನಿಸಿದರೆ ಆ ಸ್ಥಳದಿಂದ ಒಡನೇ ನಿಗ೯ಮಿಸಿ. ಈ ಪ್ರತಿಕ್ರಿಯೆಗಳು ಜಗಳಕ್ಕೆ ಎಡೆಮಾಡಬಹುದು. 


೪. ಮನಸ್ಸು ಶಾಂತವಾದ ಬಳಿಕ ಆ ವಿಷಯವನ್ನು ಆ ವ್ಯಕ್ತಿಯೊಂದಿಗೆ ಪ್ರಸ್ತಾಪಿಸಿ. ಅವರೂ ಶಾಂತವಾಗಿರುವಾಗ ಮಾತನಾಡುವುದು ಸುಲಭ. 


೫. ನೀವು ಸಮಾಧಾನವಾಗಿದ್ದಲ್ಲಿ, ಅವರು ಹೇಳಿದ್ದನ್ನು ನೀವು ಹೇಗೆ ಅಥ೯ ಮಾಡಿಕೊಂಡಿದ್ದೀರ ಎಂದು ತಿಳಿಸಿ. ನೀವು ಅಥ೯ ಮಾಡಿಕೊ೦ಡಿರುವುದು ಸರಿಯಾಗಿದ್ದರೆ ಅದಕ್ಕೆ ಸಮಂಜಸ ಪ್ರತಿಕ್ರಿಯೆ ನೀಡಿ.


೬. ನಿಮ್ಮಿಂದ ತಪ್ಪಾಗಿದ್ದಲ್ಲಿ, ಅದನ್ನು ಒಪ್ಪಿಕೊಳ್ಳಿ. ಮನುಷ್ಯರೆಂದ ಮೇಲೆ ಎಲ್ಲರಲ್ಲೂ ಏನಾದರೂ ನ್ಯೂನ್ಯತೆ ಗಳು ಇದ್ದೇ ಇರುತ್ತದೆ, ಅಲ್ಲವೇ?! ತಪ್ಪು ಸುಧಾರಿಸಿಕೊಳ್ಳಲು ಮನಸಾ ಪ್ರಯತ್ನ ಮಾಡಿ. 


೭. ಟೀಕೆಗಳನ್ನು ತೀವ್ರವಾಗಿ ವ್ಯಕ್ತೀಕರಿಸಬೇಡಿ. 

ಉದಾ: ಅಧ್ಯಾಪಕರು ಉತ್ತರ ಪತ್ರಿಕೆಯಲ್ಲಿ ಸುಲಭ ಪ್ರಶ್ನೆಗೆ ಯಾಕೆ ಉತ್ತರ ಬರೆಯಲಿಲ್ಲ ಎಂದು ಕೇಳಿದಾಗ, ನಿಮ್ಮನ್ನು ದಡ್ಡ ಎಂದು ಅವಹೇಳನ ಮಾಡುವಂತೆ ಅಂದುಕೊಳ್ಳುವುದು. ಅದರ ಬದಲು ಮುಂದಿನ ಸಾರಿ ಪರೀಕ್ಷಾ ತಯಾರಿ ಇನ್ನೂ ಗಮನ ಇಟ್ಟು ಮಾಡುವುದು ಅಧ್ಯಾಪಕರ ಮಾತನ್ನು ಸರಿಯಾಗಿ ಸ್ವೀಕರಿಸಿದಂತೆ.  


೮. ನಕಾರಾತ್ಮಕ ಟೀಕೆ  ಎನಿಸಿದ್ದಲ್ಲಿ, ಅವರು ಯಾಕೆ ಹೀಗೆ ಹೇಳಿರಬಹುದು ಎಂದು ಯೋಚಿಸಿ. ಅವರ ವೈಯಕ್ತಿಕ ಬದುಕಿನಲ್ಲಿ ಏನಾದರೂ ತೊಂದರೆಗಳು ಅನುಭವಿಸುತ್ತಿದ್ದಲ್ಲಿ ಅವರ ಮಾತುಗಳು ಕಟುವಾಗಿರಬಹುದು. ಹಾಗಿದ್ದಲ್ಲಿ ನೀವು ಅವರೊಡನೆ ಸಹಾನುಭೂತಿ ತೋರಿಸಿ. 


೯. ನಕಾರಾತ್ಮಕವಾಗಿದ್ದರೂ, ಅವರ ಮಾತಿನಲ್ಲಿ ಸತ್ಯ ಇದೆಯೇ ಎಂದು ಶೋಧಿಸಿ. ಕೆಲವೊಮ್ಮೆ ಹೇಳಿದ್ದು ಸತ್ಯವಾದರೂ ಹೇಳುವ ಶೈಲಿ ಸರಿಯಾಗಿರದೇ ಇರಬಹುದು. 


೧೦. ನೀವು ಸೂಕ್ಷ್ಮ ಮನಸ್ಸಿನವರಾಗಿದ್ದರೆ, ಆತ್ಮವಿಶ್ವಾಸ ಹೆಚ್ಚು ಮಾಡಿಕೊಳ್ಳುವ ಪ್ರಯತ್ನ ಮಾಡಿ. ಬೇರೆಯವರು ಏನಾದರೂ ಹೇಳಲಿ, ನಿಮ್ಮನ್ನು ನೀವು ನಂಬಿ, ನಿಮ್ಮನ್ನು ನೀವೇ ಪ್ರೋತ್ಸಾಹಿಸಿ. 


೧೧. ಸಹಾಯಕಾರಿಯಲ್ಲದ, ಪುನರಾವತಿ೯ಸುವ ಟೀಕೆಗಳನ್ನು ಸಂಪೂಣ೯ ನಿಲ೯ಕ್ಷಿಸಿ. ಯಾವುದೇ ಪ್ರತಿಕ್ರಿಯೆ ತೋರಿಸಬೇಡಿ. 


೧೨. ಸ್ವಭಾವತಃ ಬಹಳ ಟೀಕಿಸುವವರನ್ನ ದೂರವಿಡಿ. ದೂರವಿಡಲು ಸಾಧ್ಯವಾಗದಿದ್ದಲ್ಲಿ, ಅವರಲ್ಲಿ ಬದಲಾವಣೆ ಅಪೇಕ್ಷಿಸುವುದು ಬಿಟ್ಟು ಬಿಡಿ. ಇವರು ಇರುವುದೇ ಹೀಗೆ ಎಂದು ಅಂಗೀಕರಿಸಿ. ಮೊದಲ ಪ್ರಯತ್ನದಲ್ಲೇ ಇದು ಸಾಧ್ಯವಾಗದಿದ್ದರೂ, ಪ್ರಯತ್ನಶೀಲರಿಗೆ ಇದು ಖಂಡಿತಾ ಸಾಧ್ಯ. 


೧೩. ನಾವು ಬೇರೆಯವರನ್ನು ಟೀಕಿಸುವಾಗಲೂ ಸಕಾರಾತ್ಮಕವಾಗಿದ್ದಲ್ಲಿ ಈ ಕಲೆಯು ಕರಗತವಾದಂತೆ!!
















ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು